ಬೆಂಗಳೂರು : ಆರ್‌ಎಸ್‌ಎಸ್ ಹಾಗೂ ಕೆಲ ಬಲಪಂಥೀಯ ಸಂಘಟನೆಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇಂತಹ ಬೆದರಿಕೆಗಳ ನಡುವೆಯೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿಯೇ ನಾವು ಧ್ವನಿ ಎತ್ತಿದಾಗಲೆಲ್ಲಾ ಬೆದರಿಕೆ ಕರೆಗಳು ಬಂದಿದ್ದವು. ನನ್ನ ತಂದೆ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಹ ಲ್ಯಾಂಡ್ ಲೈನ್ ಫೋನ್ ಮೂಲಕ ಹಲವು ಬಾರಿ ಬೆದರಿಕೆ ಹಾಕಲಾಗಿತ್ತು. ಈಗಲೂ ಸಫ್ದರ್ ಜಂಗ್ ಪೊಲೀಸ್ ಠಾಣೆಯಲ್ಲಿ ನಮ್ಮ ದೂರು ದಾಖಲಾಗಿರುವುದು ಇದೆ. ಅವರು ಬೆಂಗಳೂರಿನ ಮನೆಯಲ್ಲಿ ಇದ್ದಾಗಲೂ ರಾತ್ರಿ ಒಂದು ಗಂಟೆಯ ಸಮಯದಲ್ಲಿ ಲ್ಯಾಂಡ್ ಲೈನ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ ಘಟನೆಗಳೂ ನಡೆದಿವೆ ಆದ್ರೆ ಈ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಹೆದರಿಸುವವರು ಇವರು ಹೊಸಬರಲ್ಲ. ನೂರು ವರ್ಷಗಳಿಂದ ಇದೇ ರೀತಿಯ ಬೆದರಿಕೆ ಹಾಕುವ ತಂತ್ರ ಬಳಸುತ್ತಿದ್ದಾರೆ. ಗಾಂಧೀಜಿಯನ್ನು ಸಹ ಇಂತಹ ತತ್ವಗಳಿಂದಲೇ ಬಲಿಯಾಗಿದ್ದಾರೆ. ಅಂಬೇಡ್ಕರ್ ಅವರನ್ನು ಮುಗಿಸಲು ಪ್ರಯತ್ನಿಸಿದ್ದಾರೆ. ಇಂತಹ ಬೆದರಿಕೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇವರಿಗೆ ನೂರು ವರ್ಷದ ಇತಿಹಾಸವಿದ್ದರೆ, ನಮಗೂ 135 ವರ್ಷದ ಸಶಕ್ತ ಇತಿಹಾಸವಿರುವ ಪಾರ್ಟಿಯಿದೆ ಎಂದರು. ನಾನು ಏಕಾಂಗಿ ಅಲ್ಲ. ನನ್ನ ಹೋರಾಟ ನನ್ನ ಸಿದ್ಧಾಂತದ ಆಧಾರದಲ್ಲಿದೆ. ನಾನು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಪಾಲಿಸುತ್ತೇನೆ. ಸಂವಿಧಾನದ ಮೇಲಿನ ನನ್ನ ನಂಬಿಕೆ ಅಚಲ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಆದರೆ ಆರ್‌ಎಸ್‌ಎಸ್‌ನ ತತ್ವ ಸಿದ್ಧಾಂತಗಳಲ್ಲಿ ಎಲ್ಲರಿಗೂ ಸ್ಥಳವಿಲ್ಲ ಎಂದರು.