ನನಗೂ ಸೀನಿಯರಿಟಿ ಇದೆ, ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ..!

ಬೆಂಗಳೂರು ಗ್ರಾಮಾಂತರ : ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ, ನನಗೂ ಸೀನಿಯರಿಟಿ ಇದೆ. ಹೈಕಮಾಂಡ್ ನನ್ನನ್ನೂ ಕನ್ಸಿಡರ್ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಇಂಗಿತ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಅವರು, ಕ್ರಾಂತಿ ಆಗೋದು ಕಾಂಗ್ರೆಸ್‌ನಲ್ಲಿ ಅಲ್ಲ ಬಿಜೆಪಿಯಲ್ಲಿ. ಆರ್.ಅಶೋಕ್ ವಿಪಕ್ಷ ನಾಯಕ ಸ್ಥಾನಕ್ಕೆ ಸೂಟ್ ಆಗಲ್ಲ. ಅವರು ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಅವರ ಹೈಕಮಾಂಡ್‌ಗೆ ವರದಿ ಹೋಗಿದೆ. ರಾಜ್ಯ ಬಿಜೆಪಿ ಅಶೋಕ್ ಮೇಲೆ ದೂರು‌ ಕೊಟ್ಟಿದೆ. ಬಹುಶಃ ನವೆಂಬರ್‌ನಲ್ಲಿ ಅವರ ಬದಲಾವಣೆ ಮಾಡಬಹುದು. ಅಶೋಕ್‌ ಅವರನ್ನ ತೆಗೆಯೋದೆ ನವೆಂಬರ್ ಕ್ರಾಂತಿ ಎಂದು ಬಿಜೆಪಿ ನಾಯಕರಿಗೆ ಹೆಚ್.ಸಿ.ಬಾಲಕೃಷ್ಣ ಟಾಂಗ್ ಕೊಟ್ಟರು.

ಇನ್ನು ಮುಂದುವರೆದು ಮಾತನಾಡಿದ ಅವರು, ಡಿನ್ನರ್ ಪಾರ್ಟಿ ಅಂದ್ರೆ ಸಾಮಾನ್ಯವಾಗಿ ಸಚಿವರಿಗೆ ಊಟ ಹಾಕೋದು ಸರ್ವೇ ಸಾಮಾನ್ಯ. ಊಟಕ್ಕೆ ಸೇರಿದಾಗ ರಾಜಕೀಯ ಚರ್ಚೆ, ಅಭಿವೃದ್ಧಿ ಚರ್ಚೆಗಳು ಆಗಿರಬಹುದು. ಈಗ ಎರಡುವರೆ ವರ್ಷ ತುಂಬಿದೆ. ಇನ್ನೂ ಎರಡುವರೆ ವರ್ಷದಲ್ಲಿ ಯಾವರೀತಿ ಕಾರ್ಯವೈಖರಿ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಬಹುದು. ಅದನ್ನ ಬಿಟ್ಟರೇ ಬೇರೆ ರೀತಿಯ ಚರ್ಚೆ ಆಗಿಲ್ಲ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಅವಕಾಶ ನೀಡುವ ವಿಚಾರವಾಗಿ, ಡಿಸಿಎಂ ಅವರಿಗೂ ನ್ಯಾಚುರಲ್ ಆಗಿ ಅವಕಾಶ ಸಿಗಬೇಕು. ಪಕ್ಷ ಅಧಿಕಾರಕ್ಕೆ ತರಲು ಅವರದ್ದೂ ಶ್ರಮ ಇದೆ. ಅವರಿಗೂ ಒಂದು ಅವಕಾಶ ಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮುಖ್ಯ. ಎಲ್ಲಾ ವಿಚಾರವೂ ಹೈಕಮಾಂಡ್‌ಗೆ ಗೊತ್ತಿದೆ.

ಹೈಕಮಾಂಡ್‌ಗೆ ಯಾವ ಸಂದರ್ಭದಲ್ಲಿ ಯಾವ ತೀರ್ಮಾನ ಮಾಡಬೇಕು ಅಂತ ಗೊತ್ತಿದೆ. ಪರಮೇಶ್ವರ್ ಸಿಎಂ ಸ್ಥಾನದ ಆಕಾಂಕ್ಷಿ ಆದ್ರೆ ತಪ್ಪೇನಿಲ್ಲ.! ಅವರೂ ಕೂಡಾ ಸೀನಿಯರ್ ಮೆಂಬರ್. ಡಿಸಿಎಂ ಆಗಿ, ಪಕ್ಷದ ಅಧ್ಯಕ್ಷರಾಗಿ, ಗೃಹ ಸಚಿವರಾಗಿ ಕೆಲಸ‌ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ತಲೆಬಾಗುತ್ತೇವೆ. ಸಂಪುಟದಿಂದ ಹಿರಿಯ ಸಚಿವರಿಗೆ ಕೋಕ್ ವಿಚಾರವಾಗಿ, ಕೋಕ್ ಕೊಡ್ತಾರೆ ಅನ್ನೋದನ್ನ ಹೇಳಬೇಡಿ. ಬೇರೆಯವರಿಗೆ ಅವಕಾಶ ಕೊಡಬೇಕು ಅಂದ್ರೆ ಬದಲಾವಣೆ ಆಗಬಹುದು. ಸಚಿವ ಸ್ಥಾನ ಇರೋದೆ 34 ಅದನ್ನ ಎಲ್ಲರಿಗೂ ಕೊಡೋಕಾಗಲ್ಲ. ಎರಡೂವರೆ ವರ್ಷ ಯಾರು ಉತ್ತಮ ಕೆಲಸ ಮಾಡಿದ್ದಾರೆ ಅವರಿಗೆ ಪಕ್ಷದ ಜವಾಬ್ದಾರಿ ಕೊಡ್ತಾರೆ. ಚುನಾವಣಾ ದೃಷ್ಟಿಯಿಂದ ಹೊಸಬರಿಗೆ ಮಂತ್ರಿ ಸ್ಥಾನದ ಅವಕಾಶ ಕೊಡಬಹುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *