ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಂಬರುವ ಚುನಾವಣೆಗೆ ಸಿದ್ಧತೆ ಸಂಬಂಧ ರಚಿಸಲಾಗಿರುವ ಸಮಿತಿಯಿಂದ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದು, ಮುಂದೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲುಂಟಾದರೆ ಈ ಸಮಿತಿಯೇ ಜವಾಬ್ದಾರಿ ಹೊರಬೇಕು ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ನಟ್ಟು ಬೋಲ್ಟು ಟೈಟ್ ಮಾಡೋಕೆ ಧೈರ್ಯ ಇದೆ, ಆದ್ರೆ ಯತೀಂದ್ರಗೆ ನೋಟಿಸ್ ಕೊಡೋ ಧೈರ್ಯ ಇಲ್ವಾ?
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನು ಯಲಹಂಕಕ್ಕೆ ಸೀಮಿತ ಮಾಡಿದ್ದಾರೆ. ನನಗೂ ಶಕ್ತಿ ಇದೆ. ಕಳೆದ 47 ವರ್ಷಗಳಿಂದ ನಾನು ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಈ ಸಮಿತಿ ಪಟ್ಟಿ ಮಾಡಿದ್ದಾರಂತೆ. ಅದಕ್ಕೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಸಹಿ ಹಾಕಿದ್ದಾರೆ. ನಮ್ಮ ಪಕ್ಷದಲ್ಲಿ ಸೋತವರೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರ ಮುಂದೆ ಹೋಗಿ ನಿಲ್ಲುವುದಕ್ಕೆ ಒಂದು ಮುಜುಗರ ಆಗುತ್ತದೆ ಎಂದರು.
ಆರ್.ಅಶೋಕ್ ಸರ್ಕಾರದ ಮುಂದೆ ಶರಣಾಗಿದ್ದಾರೆ..!
ನನ್ನನ್ನು ಸಮಿತಿಯಿಂದ ಕೈಬಿಟ್ಟಿರುವ ಬಗ್ಗೆ ಈವರೆಗೆ ವಿಜಯೇಂದ್ರ ಅವರು ನನಗೆ ಒಂದು ಕರೆಯನ್ನೂ ಮಾಡಿಲ್ಲ. ಅವರು ಎಲ್ಲಾ ಮುಖಂಡರ ಸಭೆ ಕರೆದು ಸಮಿತಿ ರಚಿಸಬಹುದಿತ್ತು. ಈ ಪಟ್ಟಿಯನ್ನು ಆರ್.ಅಶೋಕ್ ಮಾಡಿದರೊ ಅಥವಾ ಯಾರು ಮಾಡಿದ್ದಾರೊ ಗೊತ್ತಿಲ್ಲ. ಆದರೆ, ಅಶೋಕ್ ಅವರಾದರೂ ಇದನ್ನು ಗಮನಿಸಬೇಕಿತ್ತು. ಹಿಂದೆ ಇದೇ ಅಶೋಕ್ ಅವರು ಜಿಬಿಎ ಮಾಡಲು ಬಿಡಲ್ಲ. ಗಾಂಧೀಜಿ ತರ ದೇಹ ತುಂಡಾದರೂ ಬೆಂಗಳೂರು ಒಡೆಯಲು ಬಿಡಲ್ಲ ಎಂದಿದ್ದರು. ಈಗ ಸರ್ಕಾರದ ಮುಂದೆ ಶರಣಾಗಿದ್ದಾರೆ ಎಂದು ಲೇವಡಿ ಮಾಡಿದರು.
ಮುಂದೆ ಎದುರಾಗುವ ಜಿಬಿಎ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ಅದನ್ನು ಸಮಿತಿ ಮುಖಂಡರೇ ಹೊರಬೇಕು. ನಮ್ಮ ತಲೆಗೆ ಕಟ್ಟುವುದು ಬೇಡ. ನಾನು ನನ್ನ ಕ್ಷೇತ್ರ ನೋಡಿಕೊಳ್ಳುತ್ತೇನೆ ಎಂದು ಅತೃಪ್ತಿ ಹೊರಹಾಕಿದರು.