ಪ್ರಿಯಾಂಕ್ ಖರ್ಗೆ ಅಹಂಕಾರದಿಂದ ರಾಜ್ಯದಲ್ಲಿ ಅಶಾಂತಿ : ಜಗದೀಶ್ ಶೆಟ್ಟರ್

ಧಾರವಾಡ : ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆಗೆ ಏನಾಗಿದ್ಯೋ ಗೊತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆರ್ಥಿಕ ಪರಿಸ್ಥಿತಿ ಕ್ಷೀಣಿಸಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ₹33,000 ಕೋಟಿ ಬಿಲ್ ಬಾಕಿಯಿದೆ, ಸರಕಾರಿ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ, ರೈತರಿಗೆ ಪರಿಹಾರ ಒದಗಿಸಿಲ್ಲ. ಇದರಿಂದ ಗುತ್ತಿಗೆದಾರರು, ಸರಕಾರಿ ನೌಕರರು ಮತ್ತು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಡೀ ಆಡಳಿತ ಕುಸಿದುಹೋಗಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರಕಾರ ಜಾತಿ ಸಮೀಕ್ಷೆ, ಆರ್‌ಎಸ್‌ಎಸ್ ವಿವಾದದಂತಹ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಎತ್ತುತ್ತಿದೆ ಎಂದು ಆರೋಪಿಸಿದರು. ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಯಾವುದೇ ಆದೇಶದಲ್ಲಿ ಅದರ ಹೆಸರು ಉಲ್ಲೇಖವಾಗಿಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. 2013ರಲ್ಲಿ ತಾವು ಸಿಎಂ ಆಗಿದ್ದಾಗ ಬಂದ ಆದೇಶವನ್ನು ಶಿಕ್ಷಣ ಇಲಾಖೆಯಿಂದ ನೀಡಲಾಗಿತ್ತು, ಆದರೆ ಅದು ಕ್ಯಾಬಿನೆಟ್ ನಿರ್ಧಾರವಲ್ಲ. ‘ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ತಪ್ಪಾಗಿ ತಿರುಚಿ, ಆರ್‌ಎಸ್‌ಎಸ್ ವಿರುದ್ಧ ನಾಟಕ ಮಾಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆ ನಡೆಸದಂತೆ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಧೈರ್ಯವಿದ್ದರೆ ಸಂಘದ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿ ಎಂದು ಸವಾಲು ಹಾಕಿದರು.

ಇನ್ನು 13 ರಂದು ಮತ್ತೊಂದು ಪ್ರಿಯಾಂಕ್ ಪತ್ರ ಬರೆದಿದ್ದಾರೆ. ಅದರಲ್ಲಿ ಸರಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಅಂತಾ ಬರೆದಿದ್ದಾರೆ. ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿರಿ? ನಿಮಗೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರವೇ ಇಲ್ಲ. ಈ ಅಧಿಕಾರ ಇರೋದು ಕೇಂದ್ರಕ್ಕೆ ಮಾತ್ರ. 1966ರಲ್ಲಿ ನೆಹರೂರವರು ಆರ್‌ಎಸ್‌ಎಸ್ ಮತ್ತು ಜಮಾತೆ ಇಸ್ಲಾಮ್‌ನ ಚಟುವಟಿಕೆಗಳಲ್ಲಿ ಸರಕಾರಿ ನೌಕರರು ಭಾಗವಹಿಸದಂತೆ ಆದೇಶಿಸಿದ್ದರು. ಆದರೆ, 2024ರ ಜುಲೈ 9ರಂದು ಕೇಂದ್ರ ಸರಕಾರ ಈ ಆದೇಶದಿಂದ ಆರ್‌ಎಸ್‌ಎಸ್ ಹೆಸರನ್ನು ತೆಗೆದು, ಸರಕಾರಿ ನೌಕರರಿಗೆ ಸಂಘದ ಚಟುವಟಿಕೆಯಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಹೀಗಾಗಿ, ರಾಜ್ಯ ಸರಕಾರಕ್ಕೆ ಈ ರೀತಿಯ ಆದೇಶ ನೀಡುವ ಅಧಿಕಾರವಿಲ್ಲ. ಲಿಂಗಸೂರಿನಲ್ಲಿ ಪಿಡಿಒ ಅಮಾನತು ಕಾನೂನುಬಾಹಿರವಾಗಿದ್ದು, ತಕ್ಷಣ ಹಿಂಪಡೆಯಬೇಕು. ಕೋರ್ಟ್‌ಗೆ ಹೋದರೆ ಸರಕಾರದ ಆದೇಶ ವಜಾಗೊಳ್ಳುತ್ತದೆ ಎಂದು ಶೆಟ್ಟರ್ ಎಚ್ಚರಿಸಿದರು.

ಮುಂದುವರೆದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ತಡೆಯೊಡ್ಡಲು ಪ್ರಯತ್ನಿಸಿದ್ದ ಸರಕಾರ, ಧ್ವಜಗಳನ್ನು ಕಿತ್ತುಹಾಕಿತ್ತು. ಆದರೆ, ಹೈಕೋರ್ಟ್ ಈಗ ಪಥಸಂಚಲನಕ್ಕೆ ಅನುಮತಿ ನೀಡಿದೆ. ಕಾನೂನುಬಾಹಿರವಾಗಿದ್ದರೆ ಕೋರ್ಟ್ ಅನುಮತಿ ನೀಡುತ್ತಿರಲಿಲ್ಲ. ಸಂಘದ ಜನಪ್ರಿಯತೆಯನ್ನು ಸಿಎಂ ಮತ್ತು ಪ್ರಿಯಾಂಕ್ ಖರ್ಗೆ ಸಹಿಸಿಕೊಳ್ಳಲಾರದೆ, ಈ ರೀತಿಯ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.

Leave a Reply

Your email address will not be published. Required fields are marked *