ಕಾರವಾರ : ಸಚಿವ ಸ್ಥಾನ ತ್ಯಜಿಸುವಂತೆ ಹೈಕಮಾಂಡ್ ಕೇಳಿದ್ರೆ, ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಜಿಲ್ಲೆಯ ಯಲ್ಲಾಪುರದಲ್ಲಿ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ವಿಚಾರವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಮುಖ್ಯಮಂತ್ರಿಗಳ ಮನೆಯಲ್ಲಿ ಸೋಮವಾರ ರಾತ್ರಿ ನಡೆದ ಔತಣಕೂಟದಲ್ಲಿ ಸಚಿವ ಸಂಪುಟ ಪುನರ್ ರಚನೆಯ ವಿಚಾರ ಚರ್ಚೆಯೇ ಆಗಿಲ್ಲ. ಎಲ್ಲಾ ಇಲಾಖೆಯ ಸಚಿವರು ತಮ್ಮ ಇಲಾಖೆಗಳಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ರು ಅಷ್ಟೇ ಎಂದರು.
ಇನ್ನು ನಾನು ಸಂಘದ ನಿಷೇಧದ ಬಗ್ಗೆ ಏನನ್ನೂ ಪ್ರತಿಕ್ರಿಯಿಸಲ್ಲ. ಆದರೆ, ಸರ್ಕಾರಿ ಶಾಲೆಗಳ ಆವರಣದಲ್ಲಿ ಚಟುವಟಿಕೆ ನಡೆಯಬಾರದೆಂಬುದಕ್ಕೆ ನನ್ನ ಬೆಂಬಲವಿದೆ. ಆರ್‌ಎಸ್‌ಎಸ್ ತಮ್ಮದು ಸರ್ಕಾರಿ ಸಂಘಟನೆಯಲ್ಲ ಎಂದು ಹೇಳಿ, ರಾಜಕೀಯದಲ್ಲಿಯೇ ತೊಡಗಿ ಹೋಗಿದ್ದಾರೆ ಎಂಬ ಸಂಗತಿ ಇಡೀ ದೇಶಕ್ಕೆ ತಿಳಿದಿದೆ. ಹಾಗಾಗಿ ಸರ್ಕಾರಿ ಕಟ್ಟಡಗಳು, ಅದರ ಆವಾರಗಳಲ್ಲಿ ಚಟುವಟಿಕೆಗಳು ನಡೆಯದಂತೆ ನಿಷೇಧ ಹೇರುವುದು ಸರಿಯಾದ ಕ್ರಮ ಎಂದರು. ಇನ್ನು ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ನನಗೆ ತಿಳಿದಿಲ್ಲ. ಸದ್ಯ ಉತ್ತಮ ಮುಖ್ಯಮಂತ್ರಿ ಇರುವಾಗ ಇನ್ನೊಂದು ಮುಖ್ಯಮಂತ್ರಿಗಳ ನೇಮಕದ ವಿಚಾರದ ಚರ್ಚೆ ಸರಿಯಲ್ಲ ಎಂದರು.