ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅವರ ಪತ್ನಿ ಹಾಸನಾಂಬೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಪ್ರಾರ್ಥನೆ ವೇಳೆ ಹಾಸನಾಂಬೆ ಹೂ ಮೂಲಕ ವರ ನೀಡಿದ್ದಾಳೆ ಎಂದು ಸುದ್ದಿಯಾಗಿದೆ. ಡಿಸಿಎಂ ಡಿಕೆಶಿ ಪ್ರಾರ್ಥನೆ ಸಲ್ಲಿಸುವಾಗ ಹೂ ಎರಡು ಬಾರಿ ಬಲಕ್ಕೆ ಬಿದ್ದಿದ್ದು, ಡಿಕೆಶಿ ಸಂತಸ ವ್ಯಕ್ತಪಡಿಸಿದ್ದಾರೆ.
ನಿನ್ನೆ ಹಾಸನಾಂಬಾ ದೇವಸ್ಥಾನಕ್ಕೆ ತೆರಳಿದ್ದ ಡಿಕೆಶಿ ಶತ್ರುಗಳ ಮೇಲೆ ವಿಜಯದ ಸಂಕೇತವಾಗಿ ವಿಶೇಷ ಪೂಜೆ ಸಲ್ಲಿಸಿದ್ರು. 5 ನಿಮಿಷಗಳ ಕಾಲ ಶಕ್ತಿಯುತವಾದ ಖಡ್ಗಮಾಲಾ ಸ್ತೋತ್ರ ಪಠಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಪ್ರಸಾದ ಬಹಳ ಚೆನ್ನಾಗಿ ಆಗಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಈ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹಾಸನಾಂಬೆ ವರ ನೀಡಿದ್ರಾ ಎಂಬ ವಿಚಾರ ಚರ್ಚೆ ಆಗುತ್ತಿದೆ.
ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ಓಂ ಹಾಸನಪುರ ನಿಲಯೇ ದೇವಿ, ಶಕ್ತಿಸ್ವರೂಪಿಣಿ। ಕಾರುಣ್ಯಮಯಿ ಜಗದಂಬೆ, ಪಾಹಿ ಮಾಂ ಶರಣಾಗತಂ॥ ಹಾಸನದ ಅಧಿದೇವತೆ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ ದೃಶ್ಯಗಳು ಎಂದು ದೇವಾಲಯದ ವೀಡಿಯೋ ಹಂಚಿಕೊಂಡಿದ್ದಾರೆ.
ಹಾಸನದ ಅಧಿದೇವತೆ ಹಾಗೂ ಶಕ್ತಿ ಪೀಠಗಳಲ್ಲಿ ಒಂದಾದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ತಾಯಿ ಹಾಸನಾಂಬೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದರ ಜೊತೆಗೆ ಹಲವು ಪವಾಡಗಳನ್ನು ಮಾಡುವ ಮೂಲಕ ಭಕ್ತರ ಹೃದಯಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದಾಳೆ. ತಾಯಿ ಸನ್ನಿಧಿಯಲ್ಲಿ ನಾಡನ್ನು ಸಮೃದ್ಧವಾಗಿರಿಸು ಎಂದು ಪ್ರಾರ್ಥನೆ ಸಲ್ಲಿಸಿದೆ ಎಂದು ಹೇಳಿದ್ದಾರೆ.