ನವದೆಹಲಿ : ನೊಬೆಲ್ ಶಾಂತಿ ಪುರಸ್ಕಾರ ಕೈತಪ್ಪುತ್ತಿದ್ದಂತೆ ಬಾಲಸುಟ್ಟ ಬೆಕ್ಕಿನಂತಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಯುದ್ಧವನ್ನ ಮುಂದುವರೆಸಿದ್ದಾರೆ. ಭಾರತದ ಬಳಿಕ ಇದೀಗ ಚೀನಾದ ಮೇಲೆ ಶೇ.100ರಷ್ಟು ಹೆಚ್ಚುವರಿ ಸುಂಕ ವಿಧಿಸಲು ಮುಂದಾಗಿದ್ದಾರೆ.
ಶುಕ್ರವಾರ ಚೀನಾದ ಮೇಲೆ 100% ಹೆಚ್ಚುವರಿ ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದು, ಈ ತೆರಿಗೆ ನವೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಭೆಯನ್ನ ಕೂಡಾ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಟ್ರಂಪ್ ಅವರ ಹಿಂದಿನ ನಿರ್ಧಾರಗಳ ಪರಿಣಾಮವಾಗಿ ಚೀನಾದ ಉತ್ಪನ್ನಗಳ ಮೇಲೆ 30% ಯುಎಸ್ ಸುಂಕವನ್ನು ಈಗಾಗಲೇ ವಿಧಿಸಲಾಗಿದೆ. ಇದು ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧಕ್ಕೆ ಮತ್ತಷ್ಟು ಪ್ರಚೋದನೆ ನೀಡಿದಂತಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಚೀನಾದ ಅತ್ಯಂತ ಆಕ್ರಮಣಕಾರಿ ವರ್ತನೆಗೆ ಪ್ರತಿಕ್ರಿಯೆಯಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಚೀನಾ ಅಂತಹ ಹೆಜ್ಜೆ ಇಡುತ್ತದೆ ಎಂದು ನಂಬುವುದು ಕಷ್ಟ, ಆದರೆ ಅವರು ಹಾಗೆ ಮಾಡಿದರು, ಈಗ ಇತಿಹಾಸವು ಸ್ವತಃ ಮಾತನಾಡುತ್ತದೆ. ಚೀನಾದ ವ್ಯಾಪಾರ ನೀತಿಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಪ್ರಪಂಚದಾದ್ಯಂತದ ಅನೇಕ ದೇಶಗಳು ಅಮೆರಿಕವನ್ನು ಸಂಪರ್ಕಿಸಿವೆ. ಕಳೆದ ಆರು ತಿಂಗಳಿನಿಂದ ಉಭಯ ದೇಶಗಳ ನಡುವಿನ ಸಂಬಂಧಗಳು ಉತ್ತಮವಾಗಿ ನಡೆಯುತ್ತಿದ್ದರೂ, ವಿಶೇಷವಾಗಿ ಟಿಕ್‌ಟಾಕ್ ಅನ್ನು ಅಮೆರಿಕದ ನಿಯಂತ್ರಣಕ್ಕೆ ತರುವ ಪ್ರಯತ್ನಗಳ ಸಮಯದಲ್ಲಿ, ಚೀನಾ ಒಂದು ತಂತ್ರಕ್ಕಾಗಿ ಕಾಯುತ್ತಿದೆ ಎಂದಿದ್ದಾರೆ.
ಈ ವರ್ಷದ ಆರಂಭದಲ್ಲಿ, ಅಮೆರಿಕ ಮತ್ತು ಚೀನಾ ನಡುವೆ ಸುಂಕದ ಯುದ್ಧ ಭುಗಿಲೆದ್ದಿತು. ಇದು ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ಬಹುತೇಕ ಸ್ಥಗಿತಗೊಳಿಸಿತು. ನಂತರ, ಎರಡೂ ಕಡೆಯವರು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒಪ್ಪಿಕೊಂಡರು. ಆದರೆ ಈ ಒಪ್ಪಂದವು ದುರ್ಬಲವಾಗಿದೆ ಎಂದು ಸಾಬೀತಾಯಿತು. ಇದೀಗ ಅಮೆರಿಕಾ ಅಧ್ಯಕ್ಷ ಟ್ರಂಪ್ ಚೀನಾ ವಿರುದ್ಧ ಮತ್ತೆ ಸುಂಕ ಯುದ್ಧ ಸಾರಿದ್ಧಾರೆ.