ಬೆಂಗಳೂರು : ಬಿಹಾರ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲೂ ಭಾರೀ ಬದಲಾವಣೆಯಾಗಲಿದೆ ಎಂಬ ವಿಪಕ್ಷಗಳ ಭವಿಷ್ಯ ನಿಜವಾಗುವಂತೆ ಕಾಣ್ತಿದೆ. ಸಿಎಂ ಸಿದ್ದರಾಮಯ್ಯರ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ತರೆಮರೆಯ ಸಿದ್ಧತೆ ನಡೆಯುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಕರ್ನಾಟಕ ರಾಜಕೀಯದಲ್ಲೂ ಭಾರೀ ಬದಲಾವಣೆ ತರಲಿದೆ. ಆ ನಿಟ್ಟಿನಲ್ಲಿ ಸುಮಾರು 15 ರಿಂದ 20 ಹಾಲಿ ಸಚಿವರಿಗೆ ಕೊಕ್ ನೀಡಿ, ಹೊಸಬರಿಗೆ ಮಣೆ ಹಾಕಲು ಕೈ ಪಾಳೆಯದಲ್ಲಿ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿದ್ದಂತೆ, ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ತುಂಬಲು ನಿರ್ಧರಿಸಿರುವ ಹೈಕಮಾಂಡ್ ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು, ಚುರುಕಾದ ಹಾಗೂ ಯುವ ನಾಯಕರಿಗೆ ಮಣೆ ಹಾಕಲು ನಿರ್ಧರಿಸಿದ್ದಾರೆ. ಸರ್ಕಾರದ 30 ತಿಂಗಳ ಆಡಳಿತ ಪೂರ್ಣಗೊಳ್ಳುವ ಹೊತ್ತಿಗೆ ಸಂಪೂರ್ಣ ಹೊಸ ಸ್ವರೂಪದ, ಬಲಿಷ್ಠ ಸಂಪುಟವನ್ನು ಅಸ್ತಿತ್ವಕ್ಕೆ ತರುವ ಗುರಿ ಹೊಂದಲಾಗಿದೆ. ಸಚಿವ ಸ್ಥಾನ ಕಳೆದುಕೊಳ್ಳುವ ಹಿರಿಯ ನಾಯಕರನ್ನು ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳ ಜವಾಬ್ದಾರಿಗೆ ಬಳಸಿಕೊಳ್ಳುವ ತಂತ್ರವನ್ನು ಹೈಕಮಾಂಡ್ ರೂಪಿಸಿದೆ.
ಡಿಕೆಶಿ ಬಣಕ್ಕೆ ಭಾರೀ ಹಿನ್ನಡೆ :-
ಹೌದು… ನಾಯಕತ್ವ ಬದಲಾವಣೆಯ ಚರ್ಚೆಗಳಿಗೆ ತಾತ್ಕಾಲಿಕವಾಗಿ ತೆರೆ ಎಳೆಯಲು ಸಿದ್ದರಾಮಯ್ಯ ಈ ಅಸ್ತ್ರ ಬಳಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯರ ಈ ನಿರ್ಧಾರವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಬೆಂಬಲಿಗರ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ. ಸಚಿವ ಸಂಪುಟ ವಿಚಾರದಲ್ಲಿ ಡಿಕೆಶಿ ಅವರ ಮೌನ ರಾಜಕೀಯ ವಲಯದಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಒಂದು ವೇಳೆ ಈ ಸಂಪುಟ ಪುನಾರಚನೆ ಯಶಸ್ವಿಯಾದ್ರೆ, ಸಿದ್ದರಾಮಯ್ಯ ಅವರ ನಾಯಕತ್ವ ಮತ್ತಷ್ಟು ಬಲಗೊಳ್ಳಲಿದೆ. ಇನ್ನು ಈಗಾಗಲೇ ಸಿದ್ದರಾಮಯ್ಯ, ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಕುರಿತು ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ನಾಯಕರ ಸಮಯವನ್ನು ಕೋರಿದ್ದಾರೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿ, ಅವರ ಒಪ್ಪಿಗೆ ಪಡೆದ ನಂತರವೇ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಬೆಳಗಾವಿ ಅಧಿವೇಶನದ ಆರಂಭದ ವೇಳೆಗೆ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ