ಚಿಕ್ಕಬಳ್ಳಾಪುರ : ರಾಜ್ಯ ರಾಜಕಾರಣದಲ್ಲಿ ಅಧಿಕಾರ ಬದಲಾವಣೆ ಚರ್ಚೆ ಜೋರಾಗಿದೆ. ಈ ನಡುವೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಗ್ರಾಮ ಪಂಚಾಯ್ತಿಗಳಂತೆ ಜಂಟಲ್‌ಮ್ಯಾನ್ ಅಗ್ರೀಮೆಂಟ್ ಆಗಿದೆ ಎಂದು ಬಿಜೆಪಿ ಸಂಸದ ಡಾ. ಕೆ.ಸುಧಾಕರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿರುವ ಸ್ಪಷ್ಟವಾದ ಮಾಹಿತಿಯಂತೆ, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನಡುವೆ ಮಾತುಕತೆಯಾಗಿದೆ. ಎರಡೂವರೆ ವರ್ಷ ಅಧಿಕಾರ ಹಂಚಿಕೆಯ ಚರ್ಚೆಯಾಗಿದೆ. ಅದು ದೆಹಲಿಯಲ್ಲಿ ನಡೆದ ಮಾತುಕತೆಯಾಗಿದೆ. ಜಂಟಲ್‌ಮ್ಯಾನ್ ಅಗ್ರೀಮೆಂಟ್. ಅದು ನಮ್ಮ ಗ್ರಾಮ ಪಂಚಾಯತಿ ಲೆವೆಲ್‌ನಲ್ಲೂ ನಡೆಯುತ್ತದೆ. ಎರಡೂವರೆ ವರ್ಷಕ್ಕೆ ಬದಲಾವಣೆಯಾಗುತ್ತದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆಶಿಯೂ 50% ಕಾರಣ:-
ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಅನೇಕ ಕಾರಣಗಳಿವೆ. ನಾವು ಎಲ್ಲಿ ಎಡವಿದ್ದೆವು ಅದು ಬೇರೆ ವಿಚಾರ. ನಮ್ಮ ತಪ್ಪೂ ಇದೆ, ಇಲ್ಲವೆನ್ನುತ್ತಿಲ್ಲ. ಆದರೆ, ಕಾಂಗ್ರೆಸ್ ಪಾರ್ಟಿಗೆ ಪಾಸಿಟೀವ್ ಆಗಿ ಹೇಳಬೇಕೆಂದರೆ, ಅವರು ಅಧಿಕಾರಕ್ಕೆ ಬರಲು 50 ಪರ್ಸೆಂಟ್ ಸಿದ್ದರಾಮಯ್ಯ ಕಾರಣ, ಇನ್ನು 50 ಪರ್ಸೆಂಟ್ ಡಿ.ಕೆ.ಶಿವಕುಮಾರ್ ಕೂಡಾ ಕಾರಣರು.
ಗ್ರಾಮ ಪಂಚಾಯ್ತಿ ಲೆವೆಲ್ನಲ್ಲಿ ಅವಧಿ ಮುಗಿಯಲು ಇನ್ನು ಒಂದು ತಿಂಗಳು ಇರಬೇಕಾದಾಗಲೇ ರಾಜೀನಾಮೆ ಪತ್ರವನ್ನು ನೀಡಿ, ಮುಂದಿನವರನ್ನು ಆಯ್ಕೆ ಮಾಡಲು ದಾರಿ ಮಾಡಿಕೊಡುತ್ತಾರೆ. ಅದೇ ತರ ಉನ್ನತ ಸ್ಥಾನದಲ್ಲಿ ಇರುವವರೂ ಈ ರೀತಿಯ ಜಂಟಲ್‌ಮ್ಯಾನ್ ಅಗ್ರೀಮೆಂಟ್ ಮಾಡಿಕೊಂಡಿದ್ದಾರೆ. ಈಗ ಅದರ ಮಹತ್ವವನ್ನು ಅರಿತುಕೊಳ್ಳಬೇಕು.
ಇದನ್ನೂ ಓದಿ : ‘ನವೆಂಬರ್ 14ಕ್ಕೆ ಮುಹೂರ್ತ ಫಿಕ್ಸ್, ಡಿಕೆಶಿಯೇ ನೆಕ್ಸ್ಟ್ ಸಿಎಂ’
ಬಿಹಾರ ಫಲಿತಾಂಶ ಹೈಕಮಾಂಡ್ ನಿರೀಕ್ಷೆಯಂತೆ ಬಂದರೆ ಕರ್ನಾಟಕ ಕಾಂಗ್ರೆಸ್ ಬಗ್ಗೆ ಒಂದು ಗಟ್ಟಿ ನಿರ್ಧಾರ ಮಾಡ್ತಾರೆ. ನಾಯಕತ್ವ ಬದಲಾವಣೆ ಬಗ್ಗೆ ಅಸ್ತು ಎನ್ನಬಹುದು, ಒಂದು ವೇಳೆ ಬಿಹಾರ ಫಲಿತಾಂಶದಲ್ಲಿ ಹಿನ್ನಡೆಯಾದ್ರೆ ಕರ್ನಾಟಕ ಕಾಂಗ್ರೆಸ್ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ಹೈಕಮಾಂಡ್ ಪ್ಲಾನ್ ಮಾಡಲಿದೆ ಎಂದರು.
ಮುಂದಿನ ವರ್ಷ ಆರು ರಾಜ್ಯಗಳ ಎಲೆಕ್ಷನ್ ಇರುವ ಕಾರಣಕ್ಕೆ ಕರ್ನಾಟಕ ಬಹುಮುಖ್ಯ ಪಾತ್ರ ವಹಿಸಲಿದೆ ಎಂಬುದು ಹೈಕಮಾಂಡ್ ಪ್ಲಾನ್. ಸಿದ್ದರಾಮಯ್ಯ ನಾನು ಕುರ್ಚಿ ಬಿಡಲ್ಲ ಎಂದಿಲ್ಲ. ಬೆಂಬಲಿಗರು ಮಾತ್ರ ಸಿದ್ದರಾಮಯ್ಯ ಐದು ವರ್ಷ ಸಿಎಂ ಅಂತ ಹೇಳ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ಹೈಕಮಾಂಡ್ ಕಡೆ ಬೊಟ್ಟು ಮಾಡ್ತಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಕುರ್ಚಿ ಭವಿಷ್ಯ ನಿಂತಿರುವುದು ರಾಹುಲ್ ಗಾಂಧಿ ಮಾತಿನ ಮೇಲೆ ಎಂದರು.