ಬೆಂಗಳೂರು : ನಗರದ ಶ್ವಾಸಕೋಶದಂತಿರುವ ಲಾಲ್ಬಾಗ್ಗೆ ಹಾನಿ ಮಾಡಿ ಟನಲ್ ರಸ್ತೆ ಮಾಡೋಕು ಮೊದಲು ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಡಿಕಾರಿದ್ದಾರೆ.
ಇದನ್ನೂ ಓದಿ : ‘ಈ ಟನಲ್ ರೋಡ್ ಅನ್ನೋದು ಗಾಳಿಗೋಪುರ, ರಾಜ್ಯದ ಮತ್ತೊಂದು ಎತ್ತಿನಹೊಳೆ ಯೋಜನೆ ಆಗುತ್ತೆ’
ಟನಲ್ ಯೋಜನೆ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಇಂದು ಲಾಲ್‌ಬಾಗ್‌ನಲ್ಲಿ ಜನಜಾಗೃತಿ ಅಭಿಯಾನ ನಡೆಸಿದರು. ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಸಹಿ ಸಂಗ್ರಹ ಮಾಡಿದ್ದಾರೆ. ಇದೇ ವೇಳೆ, ಜಿಬಿಎ ಮುಖ್ಯ ಇಂಜಿನಿಯರ್ ಹಾಗೂ ಲಾಲ್‌ಬಾಗ್ ಜಂಟಿ ನಿರ್ದೇಶಕರಿಂದ ಮಾಹಿತಿ ಪಡೆದ ಅಶೋಕ್, 6 ಎಕರೆ ಬಳಸಿಕೊಂಡರೆ ಇದು ಮಾರ್ಕೆಟ್ ಆಗುವುದಿಲ್ಲವೇ? ಮುಂದೆ ನಾವೂ ಇರಲ್ಲ, ನೀವೂ ಇರಲ್ಲ. ಆದ್ರೆ ನಾವು ಮಾಡುವ ಆದೇಶ ಉಳಿದುಕೊಳ್ಳುತ್ತದೆ. ಬೆಂಗಳೂರಿಗೆ ಯಾರು ಬಂದರೂ ಮೊದಲು ನೋಡುವುದೇ ಲಾಲ್‌ಬಾಗ್, ವಿಧಾನಸೌಧ ಎಂದರು.
ಮೊದಲು ರಸ್ತೆ ಗುಂಡಿಗಳನ್ನ ಮುಚ್ಚಿ..!
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಬೆಂಗಳೂರಿನ ಪರಿಸರಪ್ರೇಮಿಗಳ ಇತಿಹಾಸ ಹೊಂದಿರುವ ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಟನಲ್ ರಸ್ತೆಯ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತದೆ. ಇದರಿಂದ ಬೆಂಗಳೂರಿನ ಜನ ನಿದ್ದೆಗೆಡುವಂತಾಗಿದೆ. 18 ಕಿ.ಮೀ ಟನಲ್ ರಸ್ತೆ ನಿರ್ಮಾಣವಾದರೆ ಟ್ರಾಫಿಕ್ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದರೆ ಮಾಡಿ, ನಾವು ಬೆಂಬಲ ಕೊಡುತ್ತೇವೆ. ಆದ್ರೆ ನಗರದಲ್ಲಿ 70% ದ್ವಿಚಕ್ರ ವಾಹನಗಳಿವೆ. ಕೇವಲ 10% ಜನರಿಗಾಗಿ ಟನಲ್ ರಸ್ತೆ ಮಾಡುತ್ತಿದ್ದೀರಿ. ಬೈಕ್, ಸೈಕಲ್‌ಗಳಿಗೆ ಆ ರಸ್ತೆಗೆ ಪ್ರವೇಶವಿಲ್ಲ. ಕೇವಲ ಕಾರುಗಳಿಗೆ ಮಾತ್ರ ಪ್ರವೇಶ ಎನ್ನುತ್ತಿದ್ದೀರಿ. ಆ ಟನಲ್ ರಸ್ತೆಯಲ್ಲಿ ಟ್ರಾವೆಲ್ ಮಾಡಿದರೆ 16-20 ಸಾವಿರ ರೂಪಾಯಿ ತಿಂಗಳಿಗೆ ಖರ್ಚು ಮಾಡಬೇಕು. ಅಷ್ಟು ಖರ್ಚು ಮಾಡಿ ಇಎಂಐ ಕಟ್ಟಿದರೆ ಒಂದು ಬೆಂಜ್ ಕಾರೋ ಮೂರು ಬೆಡ್ ರೂಮ್‌ನ ವಿಲ್ಲಾವನ್ನೋ ಖರೀದಿಸಿಬಿಡಬಹುದು. ಇದು ಟ್ವಿನ್ ಟನಲ್ ರಸ್ತೆಯಲ್ಲ, ವಿಐಪಿ ಕಾರಿಡಾರ್ ಆಗುತ್ತೆ. ಭೂಮಿ ಮೇಲಿರುವ ರಸ್ತೆಗಳನ್ನೇ ಸರಿಯಾಗಿ ಮಾಡದೆ, ಭೂಮಿಯೊಳಗೆ ರಸ್ತೆ ಮಾಡಲು ಹೊರಟಿದ್ದಾರೆ. ಟನಲ್ ರಸ್ತೆ ಯೋಜನೆಗೂ ಮುನ್ನ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳನ್ನ ಮುಚ್ಚಿ ಎಂದು ಸಲಹೆ ನೀಡಿದರು.
ಇನ್ನು ಈ ಯೋಜನೆಗಾಗಿ 1 ಕಿ.ಮೀಟರಿಗೆ ₹1,285 ಕೋಟಿ ಖರ್ಚಾಗುತ್ತಿದೆ. ಇಸ್ರೋದ ಮಂಗಳಯಾನವೇ ಇದಕ್ಕಿಂತಲೂ ಕಡಿಮೆ ಬಜೆಟ್‌ನಲ್ಲಿ ಆಗಿದೆ. ಈಗ ಈ ದುಬಾರಿ ಯೋಜನೆಗಾಗಿ ಸಾಲ ಮಾಡಲು ಹೊರಟಿದ್ದಾರೆ. ಆ ಸಾಲಕ್ಕೆ ಬಡ್ಡಿ ಎಲ್ಲಿಂದ ಕೊಡುತ್ತೀರಿ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳುವ ಯೋಜನೆ. ಸೌಖ್ಯವಾಗಿರಲಿ ಎಂದು ಕೆಂಪೇಗೌಡರು ಶಿಲೆಗಳ ಮೇಲೆ ಬೆಂಗಳೂರು ನಗರ ಕಟ್ಟಿದ್ದಾರೆ, ಇಲ್ಲಿ ಭೂಕಂಪಗಳು ಆಗುವುದಿಲ್ಲ. ಆದರೆ ಈ ಯೋಜನೆಯ ಮೂಲಕ 3 ಸಾವಿರ ದಶಲಕ್ಷ ಶಿಲೆಗಳಿರುವ ಭೂಮಿಯ ಆಳವನ್ನ ಕೊರೆಯಲು ಹೊರಟಿದ್ದೀರಿ. ಲಾಲ್‌ಬಾಗ್‌ನಲ್ಲಿ ಕಾನೂನಿನ ಬಗ್ಗೆ ರಾಜ್ಯ ಸರ್ಕಾರವೇ ಬೋರ್ಡ್ ಹಾಕಿ ತಾನೇ ಕೊಲೆ ಮಾಡಲು ಹೊರಟಿದೆ ಎಂದುದರು.