ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಜಾತಿ ಸಮೀಕ್ಷೆ..!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಜಾತಿ ಸಮೀಕ್ಷೆ ನಡೆಸಲಾಗಿದೆ. ಸುಮಾರು 45 ನಿಮಿಷಗಳ ಕಾಲ ಗಣತಿದಾರರಿಗೆ ಸಿಎಂ ಮಾಹಿತಿ ನೀಡಿದ್ದು, ಸಿಬ್ಬಂದಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಒಟ್ಟು 5 ಜನರನ್ನು ಒಳಗೊಂಡಿದ್ದ ಸಮೀಕ್ಷಾ ತಂಡ ಸಿಎಂ ಮನೆಯಲ್ಲಿ ಗಣತಿ ಕಾರ್ಯ ನಡೆಸಿದೆ.

ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಮೀಕ್ಷೆಗಾಗಿ ನನ್ನ ಮನೆಗೆ ಭೇಟಿ ನೀಡಿದ ಸಿಬ್ಬಂದಿಗೆ ಮಾಹಿತಿ ನೀಡಿ ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದ್ದೇನೆ. ಅಸಮಾನತೆ, ಬಡತನವನ್ನು ನಿವಾರಣೆ ಮಾಡಿ ಸಮಸಮಾಜ ನಿರ್ಮಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರವು ಈ ಸಮೀಕ್ಷೆಯನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಂಡು ತಮ್ಮ ಮಾಹಿತಿಯನ್ನು ಪ್ರಾಮಾಣಿಕವಾಗಿ ನೀಡಬೇಕು ಎಂದು ಸಿಎಂ ಕರೆ ನೀಡಿದ್ದಾರೆ.

ಸಮೀಕ್ಷೆ ವೇಳೆ ಪ್ರತಿಯೊಬ್ಬರು ಮಾಹಿತಿ ಕೊಟ್ಟಾಗ ಮಾತ್ರ ಸಮಾಜದ ವಾಸ್ತವ ಸ್ಥಿತಿಗತಿ ಬಗ್ಗೆ ನಿಖರ ಮಾಹಿತಿ ದೊರೆತು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ ಅವರ ಪ್ರಗತಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ. ಇದು ಯಾವುದೇ ಒಂದು ಜಾತಿಗೆ ಸೀಮಿತವಾದ ಸಮೀಕ್ಷೆಯಲ್ಲ, ರಾಜ್ಯದ ಪ್ರತಿಯೊಬ್ಬರ ಜೀವನದ ಮೇಲೆ ಬೆಳಕು ಚೆಲ್ಲುವ ವೈಜ್ಞಾನಿಕ ಪ್ರಯತ್ನ. ಸಮೀಕ್ಷೆಯಲ್ಲಿ ಭಾಗಿಯಾದ್ರೆ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಆಗಲ್ಲ. ಹೀಗಾಗಿ ಚಿಂತೆ ಬಿಟ್ಟು, ಧೈರ್ಯವಾಗಿ ಸಿಬ್ಬಂದಿ ಜೊತೆ ಮಾಹಿತಿ ಹಂಚಿಕೊಳ್ಳಿ ಎಂದು ಸಿಎಂ ತಿಳಿಸಿದ್ದಾರೆ.

Leave a Reply

Your email address will not be published. Required fields are marked *