RSSಗೆ ಉಳಿಗಾಲವಿಲ್ಲ, ಆ ದೊಣ್ಣೆ ಜನರ ಕೈಗೆ ಸಿಕ್ಕರೆ ಬಡಿಸಿಕೊಳ್ತೀರಾ! ಎಚ್ಚೆತ್ತುಕೊಳ್ಳಿ

ಬೆಂಗಳೂರು : ದೊಣ್ಣೆ ಹಿಡಿದು ಸಮಾಜದಲ್ಲಿ ಭಯ ಸೃಷ್ಟಿಸುವವರಿಗೆ ಭವಿಷ್ಯವಿಲ್ಲ. ಆರ್‌ಎಸ್‌ಎಸ್‌ ತನ್ನ ನಡವಳಿಕೆ ಬದಲಿಸಿಕೊಳ್ಳದಿದ್ದರೆ, ಜನರ ಕೈಯಲ್ಲೇ ದೊಣ್ಣೆಯಿಂದ ಹೊಡೆಸಿಕೊಳ್ಳುವ ದಿನಗಳು ದೂರವಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನ ಪಥಸಂಚಲನ, ಅದರ ಕಾರ್ಯವೈಖರಿ ಮತ್ತು ಫಂಡಿಂಗ್ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ರು. ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ. ಈ ದೇಶದ ಜನರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಭರವಸೆಯನ್ನು ಮೂಡಿಸಿರುವುದು ಬಾಬಾ ಸಾಹೇಬ ಅಂಬೇಡ್ಕರ್‌ ಅವರು ನೀಡಿದ ಸಂವಿಧಾನದಿಂದ ಮಾತ್ರ. ಆರ್‌ಎಸ್‌ಎಸ್‌ನ ಪಥಸಂಚಲನವನ್ನು ದ್ವೇಷದ ಬೀದಿ ಎಂದು ಕರೆದ ಅವರು, ಪಥ ಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ? ದೊಣ್ಣೆ, ಲಾಠಿ, ಬೂಟಿನ ಪಥಸಂಚಲನದಿಂದ ಸಮಾಜದಲ್ಲಿ ಕೇವಲ ಭಯ ಮತ್ತು ದ್ವೇಷದ ವಾತಾವರಣ ನಿರ್ಮಾಣವಾಗುತ್ತಿದೆ. ಇದರ ಮೂಲ ಉದ್ದೇಶವೇ ಭಯ ಹುಟ್ಟಿಸುವುದು ಎಂಬುದು ಸ್ಪಷ್ಟ ಎಂದು ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್‌ ಒಂದು ಭೂಗತ ಸಂಘಟನೆಯೇ?
ಸಂಘಟನೆಯ ಹಣಕಾಸಿನ ಮೂಲವನ್ನು ಪ್ರಶ್ನಿಸಿರುವ ಹರಿಪ್ರಸಾದ್, ಆರ್‌ಎಸ್‌ಎಸ್ ಒಂದು ಪೇಯ್ಡ್ ಸಂಘಟನೆಯಲ್ಲ ಎಂದಾದ್ರೆ, ದೇಶ-ವಿದೇಶಿ ಮೂಲಗಳಿಂದ ಹರಿದುಬರುತ್ತಿರುವ ಕೋಟ್ಯಂತರ ರೂಪಾಯಿ ಹಣಕ್ಕೆ ಯಾರು ಹೊಣೆ?’ ಎಂದು ಪ್ರಶ್ನಿಸಿದ್ದಾರೆ. ಸಮಾಜ ಸೇವೆ ಮಾಡಲು ಆರ್‌ಎಸ್‌ಎಸ್‌ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಯಾಗಿ ನೋಂದಣಿಯಾಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ? ಕೇವಲ ಆರ್‌ಎಸ್‌ಎಸ್‌ಗೆ ವಿದೇಶದಿಂದ ಹಣ ಬರಲಿ ಎಂಬ ದುರುದ್ದೇಶದಿಂದಲೇ ಎನ್‌ಜಿಒಗಳಿಗೆ ಬರುವ ವಿದೇಶಿ ದೇಣಿಗೆಯನ್ನು ನಿಲ್ಲಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ನೂರು ವರ್ಷಗಳ ಇತಿಹಾಸದಲ್ಲಿ ಆರ್‌ಎಸ್‌ಎಸ್‌ ಸಮಾಜಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಹಾದಿಬೀದಿಯಲ್ಲಿ ದೊಣ್ಣೆ ಹಿಡಿದು ಶಾಂತಿ-ಸುವ್ಯವಸ್ಥೆ ಹಾಳು ಮಾಡಿದ್ದೇ ನಿಮ್ಮ ಸಾಧನೆಯೇ? ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ. ಬೇಗ ಎಚ್ಚೆತ್ತುಕೊಳ್ಳದಿದ್ದರೆ ಆರ್‌ಎಸ್‌ಎಸ್‌ಗೆ ಉಳಿಗಾಲವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *