ಆರ್‌ಎಸ್‌ಎಸ್‌ ಸಂಘಟನೆಯನ್ನೇ ನಿಷೇಧಿಸಬೇಕು ಎಂದು ನಾನು ಹೇಳಿಲ್ಲ..!

ಬೆಂಗಳೂರು : ಆರ್‌ಎಸ್‌ಎಸ್‌ ಸಂಘಟನೆಯನ್ನ ನಿಷೇಧಿಸಬೇಕು ಎಂದು ನಾನು ಹೇಳಿಲ್ಲ. ನಾನು ಪತ್ರ ಬರೆದಿರುವುದು ಸರ್ಕಾರಿ ಸ್ಥಳಗಳಲ್ಲಿ ಸಂಘ ಪರಿವಾರದವರ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು, ಅಂತಾ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರೆಸ್ಸೆಸ್‌ ನಿಷೇಧಿಸಬೇಕು ಎಂದು ಹೇಳಿಲ್ಲ. ನಿಯಮಾವಳಿ ಪ್ರಕಾರ ಅದು ನೋಂದಣಿಯಾಗದ ಸಂಸ್ಥೆ. ಪೊಲೀಸರ ಅನುಮತಿ ಪಡೆಯದೆ ಸರ್ಕಾರಿ ಹಾಗೂ ಅನುದಾನಿತ ಶಾಲೆ, ಕಾಲೇಜು ಮೈದಾನ, ಸಾರ್ವಜನಿಕ ಮೈದಾನ, ಉದ್ಯಾನ ಮತ್ತಿತರ ಸ್ಥಳಗಳಲ್ಲಿ ಶಾಖೆ, ಬೈಠಕ್‌ಗಳನ್ನು ನಡೆಸುತ್ತಾರೆ. ಅದನ್ನು ನಿಷೇಧಿಸಬೇಕು. ಬೇಕಿದ್ದರೆ ಅವರು ಖಾಸಗಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಿಕೊಳ್ಳಲಿ ಎಂದು ಹೇಳಿದ್ದೇನೆ. ಸರ್ದಾರ್ ವಲ್ಲಬಾಯಿ ಪಟೇಲ್ ಅವರು ಹಿಂದೆ ಆರೆಸ್ಸೆಸ್‌ ಬ್ಯಾನ್ ಮಾಡಿದ್ದರು. ಹೇಡಿಗಳು ನಂತರ ಪಟೇಲರ ಕಾಲಿಗೆ ಬಿದ್ದು, ನಾವು ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ನಿಯತ್ತು ರಾಷ್ಟ್ರಧ್ವಜಕ್ಕೆ ಎಂದು ಕ್ಷಮೆ ಕೋರಿದ್ದಕ್ಕೆ ನಿಷೇಧ ತೆರವು ಮಾಡಲಾಗಿತ್ತು. ಪಟೇಲರು ಆರೆಸ್ಸೆಸ್‌ ತತ್ವ ಎಷ್ಟು ವಿಷಕಾರಿಯಾಗಿದೆ ಎಂದು ನೆಹರು ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಆರೆಸ್ಸೆಸ್‌ನವರು ಇತಿಹಾಸ ಓದಲಿ ಎಂದು ತಿರುಗೇಟು ನೀಡಿದ್ರು.

ಆರ್‌ಎಸ್‌ಎಸ್‌ ಸಂಘಟನೆಯವರಂತೆ ದಲಿತರ ಸಂಘಟನೆ, ಬೇರೆ ಸಂಘಟನೆಯವರು ದೊಣ್ಣೆ ಹಿಡಿದುಕೊಂಡು ಓಡಾಡಿದರೆ ಒಪ್ಪುತ್ತಾರಾ? ಅವರ ಮಕ್ಕಳಿಗೆ ಒಂದು ನಿಯಮ, ಬಡವರ ಮಕ್ಕಳಿಗೆ ಒಂದು ನಿಯಮ ಯಾಕೆ? ಪ್ರಹ್ಲಾದ್‌ ಜೋಶಿ, ಆರ್‌.ಅಶೋಕ್, ಠಾಕೂರ್‌ ದೆಹಲಿ ಕ್ಯಾಬಿನೆಟ್‌ ಸಚಿವರ ಮಕ್ಕಳು ಏನ್ ಮಾಡ್ತಿದ್ದಾರೆ ಒಮ್ಮೆ ನೋಡಿ. ಇವರ ಮಕ್ಕಳೆಲ್ಲ ಯಾಕೆ ಗಣವೇಷ ಹಾಕಿಕೊಳ್ಳುತ್ತಿಲ್ಲ. ಇವರ ಮಕ್ಕಳೆಲ್ಲ ಯಾಕೆ ಗೋಮೂತ್ರ ಕುಡಿಯುತ್ತಿಲ್ಲ. ಇವರ ಮಕ್ಕಳೆಲ್ಲ ಯಾಕೆ ಗಂಗಾ ನದಿಯಲ್ಲಿ ಮುಳುಗುತ್ತಿಲ್ಲ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *