ಬೆಂಗಳೂರು : ನನಗೆ ಮಾಟ-ಮಂತ್ರ ಎಲ್ಲ ಗೊತ್ತಿಲ್ಲ. ನಾವು ಶಿವನ ಆರಾಧಕರು. ಕಾಯಕವೇ ಕೈಲಾಸ ಎಂಬುದೊಂದೇ ಗೊತ್ತಿರುವುದು. ಕರ್ಮವನ್ನಂತೂ ನಂಬುತ್ತೇನೆ. ಕೆಟ್ಟದ್ದು ಮಾಡಿದ್ದರೆ ಖಂಡಿತವಾಗಿಯೂ ಅದು ನಮಗೆ ವಾಪಸ್ ಬರುತ್ತದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾಟ-ಮಂತ್ರ ಮಾಡಿಸಿದ್ದರಿಂದಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಗ್ಯ ಹಾಳಾಗಿದೆ ಎಂಬ ಶಾಸಕ ಮುನಿರತ್ನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಿಖಿಲ್, ನಮಗೆ ಮಾಟ-ಮಂತ್ರ ಇದೆಲ್ಲ ಗೊತ್ತಿಲ್ಲ. ನಾವೆಲ್ಲ ಶಿವನ ಆರಾಧಕರು. ಪ್ರತಿದಿನ ಮನೆಯಿಂದ ಹೊರಡುವ ಮುನ್ನ ಭಕ್ತಿಪೂರ್ವಕವಾಗಿ ಪೂಜೆ ಮಾಡುತ್ತೇವೆ. ಅದೊಂದೇ ಗೊತ್ತು. ಮುನಿರತ್ನ ಹೇಳಿಕೆ ಬಗ್ಗೆ ಅವರನ್ನೇ ಕೇಳಿ ಎಂದು ಪ್ರತಿಕ್ರಿಯೆ ನೀಡಿದರು.
ಇನ್ನು ಮುಂದುವರೆದು ಮಾತನಾಡಿದ ಅವರು, ದೇಶದಲ್ಲಿ ಸಮಾಜವನ್ನು ಆರೆಸ್ಸೆಸ್ ಒಂದು ಒಳ್ಳೆಯ ದಿಕ್ಕಿಗೆ ತೆಗೆದುಕೊಂಡು ಹೋಗಲು ಕೆಲಸ ಮಾಡುತ್ತಿದೆ. ಒಳ್ಳೆಯ ಕೆಲಸಗಳು ಈವರೆಗೆ ಆಗುತ್ತಿದೆ. 100 ವರ್ಷ ಪೂರೈಸಿದೆ. ರಾಜಕೀಯ ಕಾರಣಕ್ಕಾಗಿ ವಿರೋಧಿಸುವುದು ಸರಿಯಲ್ಲ. ಚರ್ಚಿಸಲು ಬೇರೆ ಸಾಕಷ್ಟು ವಿಷಯವಿದೆ ಎಂದರು. ಇನ್ನು ಆರ್.ವಿ. ದೇಶಪಾಂಡೆ ಅವರು ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಅಪಸ್ವರ ಎತ್ತಿರುವುದರಲ್ಲಿ ತಪ್ಪೇನೂ ಇಲ್ಲ. ರಾಜ್ಯ ಸರ್ಕಾರ ಹೇಗೆ ನಡೆಯುತ್ತಿದೆ ಎನ್ನುವುದನ್ನು ಅವರು ಜನರ ಮುಂದಿಟ್ಟಿದ್ದಾರೆ. ದೊಡ್ಡ ಬಜೆಟ್, ₹55 ಸಾವಿರ ಕೋಟಿ ಗ್ಯಾರಂಟಿಗೆ ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. ಅಭಿವೃದ್ಧಿಯಂತೂ ಸಂಪೂರ್ಣ ಶೂನ್ಯ ಆಗಿದೆ. ಬಿಹಾರ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಆಗಿದೆ. ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಏನೇನು ತೀರ್ಮಾನ ಆಗುತ್ತದೆ ಕಾದು ನೋಡೋಣ ಎಂದು ಹೇಳಿದರು