ಬೆಂಗಳೂರು : ನನಗೆ ನೀಡಲಾಗಿದ್ದ ಬೆಂಗಾವಲು ರಕ್ಷಣೆಯನ್ನು ವಾಪಸ್ ಪಡೆದಿದ್ದಾರೆ. ಇದ ಹಿಂದೆ ಪ್ರಿಯಾಂಕ್ ಖರ್ಗೆ ಕೈವಾಡವಿದೆ. ನನ್ನ ಜೀವಕ್ಕೆ ಏನಾದ್ರು ಅಪಾಯವಾದ್ರೆ ಅದಕ್ಕೆ ಖರ್ಗೆ ಕುಟುಂಬವೇ ಹೊಣೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ನಾನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ, ನಮ್ಮ ಮನೆಗೆ 3 ಜನ ಬೆಂಗಾವಲು ರಕ್ಷಕರನ್ನು ನೀಡಿದ್ದರು. ಇದು ನಮಗೆ ಕೊಡಬೇಕಾದ ಭದ್ರತೆ. ಇದೀಗ ಆ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಈ ನಿರ್ಧಾರದ ಹಿಂದೆ ಸರ್ಕಾರ ಹಾಗೂ ಪ್ರಿಯಾಂಕ್ ಖರ್ಗೆ, ಎಲ್ಲರೂ ಇದ್ದಾರೆ.
ಇದನ್ನೂ ಓದಿ : ತಾವೇನು ಚಿತ್ತಾಪುರದ ನಿಜಾಮನಾ? ಈ ತುರ್ತು ಪರಿಸ್ಥಿತಿ ಆಟ ಜಾಸ್ತಿ ದಿನ ನಡೆಯಲ್ಲ
ಸರ್ಕಾರ ಈ ಕ್ರಮ ಜರುಗಿಸಲು ಕಾರಣವೇನು? ರಾಜ್ಯ ವರ್ಗೀಕೃತ ಭದ್ರತಾ ಪುನರ್ ವಿಮರ್ಶಣಾ ಸಮಿತಿ ಈ ಆದೇಶ ಮಾಡಿದೆ. ನನಗೇನಾದರೂ ಆದರೆ, ಸರ್ಕಾರ ಎಷ್ಟು ಹೊಣೆಯೋ ಪ್ರಿಯಾಂಕ್ ಖರ್ಗೆಯವರ ಕುಟುಂಬವೂ ಅಷ್ಟೇ ಹೊಣೆ ಎಂದು. ನನ್ನ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ವಾಪಸ್ ಪಡೆದು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ನನ್ನ ಮೇಲೆ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ರಾಜಕಾರಣ ಮಾಡುತ್ತಿದೆ. ಇದು ಸಂಪೂರ್ಣವಾಗಿ ಟಾರ್ಗೆಟ್ ರಾಜಕಾರಣದ ಭಾಗವಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆಯಾಗಿದೆ. ನಾನು ಇಂತಹ ಬೆದರಿಕೆಗಳಿಗೂ, ಒತ್ತಡಗಳಿಗೂ ಹೆದರುವವನಲ್ಲ, ಬೆದರುವವನಲ್ಲ. ಇಂತಹ ಸಂವಿಧಾನ ವಿರೋಧಿ ನಡೆಗಳಿಂದ ನನ್ನ ಛಲ ಯಾವತ್ತೂ ಕುಂದುವುದಿಲ್ಲ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ಜಗಳ ಮಾಡಿ ಭದ್ರತಾ ಸಿಬ್ಬಂದಿ ಮತ್ತೆ ನಿವಾಸ ತೆಗೆದುಕೊಂಡಿದ್ದರು. ಈಗ ನನ್ನ ವಿಚಾರದಲ್ಲಿ ಈ ನಿರ್ಲಕ್ಷ್ಯ ಯಾಕೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅನ್ಯಾಯ ಮತ್ತು ಜನವಿರೋಧಿ ನೀತಿಗಳ ವಿರುದ್ಧ ನನ್ನ ಹೋರಾಟ ಅಚಲ ಮತ್ತು ನಿರಂತರವಾಗಿರುತ್ತದೆ. ನನ್ನ ಧ್ಯೇಯ – ಜನಹಿತ, ಸಾಮಾಜಿಕ ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ. ನನ್ನನ್ನು ಕಟ್ಟಿಹಾಕಬೇಕೆಂಬ ಕಾಂಗ್ರೆಸ್ ಸರ್ಕಾರದ ಕಸರತ್ತು ಹಗಲುಗನಸಷ್ಟೇ; ಅದು ಯಾವತ್ತೂ ನನಸಾಗುವುದಿಲ್ಲ ಎಂದು ಹೇಳಿದ್ದಾರೆ.