ತುಮಕೂರು : ಆರ್‌ಎಸ್‌ಎಸ್ ಕಟ್ಟಿಹಾಕಲು ಕಾಂಗ್ರೆಸ್ ಸರ್ಕಾರ ತಂದಿರುವ ಹೊಸ ಕಾನೂನಿಗೆ ಮಾಜಿ ಸಚಿವ ನಾಯಕ ಕೆ.ಎನ್.ರಾಜಣ್ಣ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈದ್ಗಾ ಮೈದಾನ & ರಸ್ತೆಗಳಲ್ಲಿ ನಮಾಜ್ ಮಾಡಲು ಮುಸ್ಲೀಮರು ಅನುಮತಿ ಪಡೆದುಕೊಳ್ಳುತ್ತಾರೆಯೇ? ಇದನ್ನು ತಡೆಯಲು ಸಾಧ್ಯವಿದೆಯೇ ಎಂದು ಪ್ರಶ್ನೆಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಾಜ್ ಮಾಡಲು ಅನುಮತಿ ಕೇಳಿಕೊಂಡು ಮುಸ್ಲಿಮರು ಬರುತ್ತಾರೆಯೇ? ಅನುಮತಿ ಪಡೆಯದೇ ರಸ್ತೆಯಲ್ಲಿ ನಮಾಜ್ ಮಾಡಿದರೆ ಅದನ್ನು ತಡೆಯುವ ಶಕ್ತಿ ಇದೆಯೇ? ಜಾರಿ ಮಾಡಲು ಸಾಧ್ಯವಾಗುವ ಕಾನೂನನ್ನು ಜಾರಿಗೆ ತರಬೇಕೇ ಹೊರತು, ಜಾರಿ ಮಾಡಲಾಗದ ಕಾನೂನುಗಳನ್ನು ಜಾರಿಗೆ ತಂದರೆ, ಅದು ಪುಸ್ತಕದಲ್ಲಿ ಮಾತ್ರವೇ ಇರುತ್ತದೆ. ಈ ನಿಯಮ ಯಾವ ಪ್ರಮಾಣದಲ್ಲಿ ಜಾರಿಗೆ ಬರುತ್ತದೆ ಕಾದು ನೋಡೋಣ ಎಂದರು.
ಇದಕ್ಕೂ ಮುನ್ನಾ ಜಾಗೃತ ಕರ್ನಾಟಕ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಕೆ.ಎನ್. ರಾಜಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮೀಸಲು ಕ್ಷೇತ್ರವೇ ಯಾಕೆ ಬೇಕು? ಅವರು ಸಾಮಾನ್ಯ ಕ್ಷೇತ್ರದಲ್ಲಿ ಯಾಕೆ ನಿಲ್ಲಬಾರದು? ಅವರು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ಮೀಸಲು ಕ್ಷೇತ್ರದಿಂದ ಮತ್ತೊಬ್ಬರಿಗೆ ಅವಕಾಶ ದೊರೆಯುತ್ತದೆ ಅಲ್ಲವೇ ಎಂದು ಹೇಳಿದರು.
ಇದನ್ನೂ ಓದಿ : ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸಿ: ಸಿದ್ದರಾಮಯ್ಯಗೆ ಯತ್ನಾಳ್ ಪತ್ರ
ಮೀಸಲು ಕ್ಷೇತ್ರ ಬಿಟ್ಟುಕೊಡುವ ಮನ:ಸ್ಥಿತಿ ನಮ್ಮಲ್ಲಿ ಬರಬೇಕು. ಎಲ್ಲವನ್ನು ನಾವೇ ಬಳಸಿಕೊಂಡು ಕೂತರೆ ಬೇರೆಯವರು ಎಲ್ಲಿಗೆ ಹೋಗುತ್ತಾರೆ. ನಮ್ಮಲ್ಲಿ ಧೈರ್ಯದ ಕೊರತೆಯಿದ್ದು, ಅದು ಹೋಗಬೇಕು ಎಂದು ಪರಮೇಶ್ವರ್ ಅವರಿಗೆ ಸಲಹೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್. ಕಾಂತರಾಜು, ಜಯಪ್ರಕಾಶ್ ಹೆಗ್ಡೆ ನೇತೃತ್ವದ ವರದಿ ಜಾರಿ ಮಾಡುವ ಮನಸ್ಥಿತಿ ಹೊಂದಿದ್ದರು. ಆದರೆ, ವರದಿ ಜಾರಿಗೊಳಿಸದಂತೆ ಕಾಂಗ್ರೆಸ್ ನಾಯಕರೇ ಅವರ ಮೇಲೆ ಒತ್ತಡ ಹಾಕಿದರು. ಹೀಗಾಗಿ ಮತ್ತೊಂದು ಸಮೀಕ್ಷೆ ನಡೆಸುವ ನಿರ್ಣಯ ಕೈಗೊಳ್ಳಬೇಕಾಯಿತು ಎಂದು ತಿಳಿಸಿದರು.