‘ಸೋಶಿಯಲ್‌ ಮೀಡಿಯಾದಲ್ಲಿ ಬರುವ ಕಾಮೆಂಟ್‌ಗಳನ್ನ ನೋಡಿಯಾದ್ರೂ ಜ್ಞಾನೋದಯ ಮಾಡಿಕೊಳ್ಳಲಿ’

ಚಿಕ್ಕಬಳ್ಳಾಪುರ: ನಮ್ಮ ಶಾಸಕರ ಜ್ಞಾನವಿಲ್ಲದ ಮಾತುಗಳಿಂದ ಇಡೀ ದೇಶ ಹಾಗೂ ರಾಜ್ಯದ ಜನರು ನಮ್ಮ ಕ್ಷೇತ್ರ ಕಡೆ ನೋಡಿ ನಗುವಂತಾಗಿದೆ. ಇದ್ರಿಂದ ನಮ್ಮ ಕ್ಷೇತ್ರ ನಗೆಪಾಟಲಿಗೀಡಾಗುತ್ತಿದೆ ಎಂದು ಸಂಸದ ಡಾ. ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್  ಹೆಸರು ಹೇಳದೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರ ನಡವಳಿಕೆಯಿಂದ ಕ್ಷೇತ್ರದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಸೋಶಿಯಲ್ ಮೀಡಿಯಾ ನೋಡಿಯಾದ್ರೂ ಜ್ಞಾನೋದಯ ಮಾಡಿಕೊಳ್ಳಲಿ. ಕೆಲವರಿಗೆ ದೇಶದಲ್ಲಿ ಏನು ನಡೆಯುತ್ತಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲ. ಮಾಹಿತಿ ಇಲ್ಲದೆ ಉಡಾಫೆ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಕನಿಷ್ಠಪಕ್ಷ ತಮ್ಮ ಬಗ್ಗೆ ಬರುವ ಸೋಶಿಯಲ್ ಮೀಡಿಯಾ ಕಾಮೆಂಟ್‌ಗಳನ್ನಾದರೂ ಓದಿದರೆ ಅವರಿಗೆ ಜ್ಞಾನೋದಯ ಆಗಬಹುದು. ಈ ವ್ಯಕ್ತಿಯಿಂದಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವು ರಾಷ್ಟ್ರಮಟ್ಟದಲ್ಲಿ ಹಾಸ್ಯಾಸ್ಪದವಾಗಿದೆ. ನಾನು ಎಲ್ಲಿಗೆ ಹೋದರೂ ಜನರು ನನ್ನನ್ನು ಪ್ರಶ್ನಿಸಿ ನಗುತ್ತಾರೆ ಎಂದು ಸುಧಾಕರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಕೇಂದ್ರದಿಂದ ಕರ್ನಾಟಕಕ್ಕೆ ಪರಿಹಾರ ಹಂಚಿಕೆ ತಾರತಮ್ಯ ವಿಚಾರವಾಗಿ‌ಮಾತನಾಡಿ, ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದೆಯೇ ಅನುದಾನ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತಾರೆಯೇ ಹೊರತು, ಯಾರದ್ದೋ ಮಾತು ಕೇಳಿ ಕಲಿಯಬೇಕಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂಬ ಕಾರಣಕ್ಕೆ ಯಾವುದೇ ತಾರತಮ್ಯ ಮಾಡಿಲ್ಲ. ಯುಪಿಎ ಸರ್ಕಾರದ ಕಾಲದಲ್ಲಿ ರೈಲ್ವೆ ಯೋಜನೆಗಳಿಗೆ ಸಿಕ್ಕಿದ್ದ ಅನುದಾನಕ್ಕೂ, ನಮ್ಮ ಸರ್ಕಾರದ ಅವಧಿಯಲ್ಲಿ ಸಿಕ್ಕಿದ್ದಕ್ಕೂ ಹೋಲಿಕೆ ಮಾಡಿ ನೋಡಲಿ ಎಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *