‘ಚಂದ್ರನ್ನ ನೋಡಿ ಪೂಜೆ ಮಾಡೋರ ಜೊತೆ ಇದ್ದು ಇದ್ದು ಸಿದ್ದರಾಮಯ್ಯ ಹೀಗಾಗಿದ್ದಾರೆ’

ಬೆಂಗಳೂರು : ಅಮವಾಸ್ಯೆ ಸೂರ್ಯ ಎಂದು ಟೀಕಿಸಿದ ಸಿಎಂ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯಗೆ ಅಮವಾಸ್ಯೆಗೂ ಹುಣ್ಣಿಮೆಗೂ ಇರುವ ವ್ಯತ್ಯಾಸ ಗೊತ್ತಿಲ್ಲ. ಅಮವಾಸ್ಯೆ ಇರುವ ದಿನ ಸಹ ಸೂರ್ಯ ಇರ್ತಾನೆ. ಆದರೆ ಅಮವಾಸ್ಯೆ ದಿನ ಚಂದ್ರ ಇರೋಲ್ಲ. ಈ ಚಂದ್ರನ್ನ ನೋಡಿ ಪೂಜೆ ಮಾಡೋರ ಜೊತೆ ಇದ್ದು ಇದ್ದು ಸಿದ್ದರಾಮಯ್ಯ ಹೀಗೆ ಹೇಳಿರಬಹುದು ಎಂದು ಟಾಂಗ್ ನೀಡಿದ್ರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರ್ಯ ಯಾವತ್ತೂ ಇರ್ತಾನೆ, ಸೂರ್ಯನ ಪೂಜೆ ಮಾಡೋರಿಗೂ, ಚಂದ್ರನ ಪೂಜೆ ಮಾಡೋರಿಗೆ ಇರುವ ವ್ಯತ್ಯಾಸ ತಿಳಿದು ಸಿದ್ದರಾಮಯ್ಯ ಮಾತಾಡಲಿ ಇಂತಹ ಹೇಳಿಕೆಗಳು ಸಿಎಂ ಸ್ಥಾನಕ್ಕೆ ಶೋಭೆ ತರುವುದಿಲ್ಲ. ನಾನು ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಹುದು. ಆದ್ರೆ ಅದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ. ಅವರ ವೈಯಕ್ತಿಕ ಟೀಕೆಗೆ ಹೋಗುವುದಿಲ್ಲ. ನಾನು 24 ಲಕ್ಷ ಜನರಿಂದ ಆಯ್ಕೆ ಆಗಿರುವ ಸಂಸದ. ನಮ್ಮ ಸ್ಥಾನಕ್ಕೆ ಶೋಭೆ ತರುವಂತೆ ಮಾತಾಡಬೇಕು ಎಂದರು.

ಕಾಂಗ್ರೆಸ್ ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ :-

ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ ನಿಮ್ಮ ಆಡಳಿತ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಂಸದರು, ನಿಮ್ಮ ಆಡಳಿತದಿಂದಾಗಿ ಬೆಂಗಳೂರು ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಗುಂಡಿ ಇಲ್ಲದ ಒಂದು ಕಿಮೀ ರಸ್ತೆ ಕೂಡ ಕಾಣಸಿಗುವುದಿಲ್ಲ. ರಸ್ತೆ ಗುಂಡಿಯೇ ನಿಮ್ಮ ಆಡಳಿತದ ಕಾರ್ಯವೈಖರಿ ತೋರಿಸುತ್ತಿದೆ. ಇಂತಹ ನೀವು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತಾಡುತ್ತೀರಿ, ಸಂಸದರನ್ನ ಪ್ರಶ್ನೆ ಮಾಡ್ತೀರಾ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಗ್ಯಾಂಗ್‌ರೇಪ್ ಆಗ್ತಿದೆ. ಗೃಹ ಸಚಿವರು ಜೂಜಾಡೋದ್ರಲ್ಲಿ ಬ್ಯುಸಿ ಇದ್ದಾರೆ. ಇತ್ತ 15 ಬಿಲಿಯನ್ ಡಾಲರ್ ಹೂಡಿಕೆ ಆಂದ್ರಕ್ಕೆ ಹೋಯ್ತು. ಐಟಿ ಸಚಿವರು ಆರೆಸ್ಸೆಸ್ ಬ್ಯಾನ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ ಎಂದು ತಿರುಗೇಟು ನೀಡಿದರು.

Leave a Reply

Your email address will not be published. Required fields are marked *