ಹುಬ್ಬಳ್ಳಿ : ಸದ್ಯದಲ್ಲೇ ಪ್ರಿಯಾಂಕ್ ಖರ್ಗೆ ರಾಜ್ಯದ ಉಪಮುಖ್ಯಮಂತ್ರಿ ಆಗಲಿದ್ದಾರೆ ಈ ವಿಚಾರವಾಗಿ ದೆಹಲಿ ಮಟ್ಟದಲ್ಲಿ ಮಾತುಕತೆ ನಡೆದಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಉಪಮುಖ್ಯಮಂತ್ರಿ ಆಗುವ ಬಗ್ಗೆ ದೆಹಲಿಯಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಪ್ಲ್ಯಾನ್ ನಡೆದಿದೆ. ಒಂದು ವೇಳೆ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಬಲ ಬಂದಂತಾಗುತ್ತದೆ ಎಂದರು.
ಇನ್ನು ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ಇದೆ. ಕಾಂಗ್ರೆಸ್ ಸರ್ಕಾರ ವಿನಾಕಾರಣ ಆರ್‌ಎಸ್‌ಎಸ್ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡುತ್ತಿದೆ. ಆರ್‌ಎಸ್‌ಎಸ್‌ನಲ್ಲಿ ಮುಕ್ತವಾಗಿ ಭಾಗವಹಿಸಲು ಕೇಂದ್ರ ಸರ್ಕಾರ ಗೆಜೆಟ್ ಮೂಲಕ ಅವಕಾಶ ನೀಡಿದರೂ, ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ನಿಂತ ನೀರಿನ ಸರ್ಕಾರ. ಅವರ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಆರ್‌ಎಸ್‌ಎಸ್ ವಿಚಾರವನ್ನು ಹುಟ್ಟುಹಾಕಿದ್ದಾರೆ. ಆದರೆ ಪಾಕಿಸ್ತಾನ್ ಜಿಂದಾಬಾದ್ ಎಂದ ದೇಶದ್ರೋಹ ಘೋಷಣೆ ಕೂಗುವವರಿಗೆ ರಾಜ್ಯಸಭೆ, ಲೋಕಸಭೆ ಸದಸ್ಯತ್ವ ನೀಡುತ್ತಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರನ್ನು ಕಾಂಗ್ರೆಸ್ ರಾಜ್ಯಸಭೆ ಮತ್ತು ಲೋಕಸಭೆಗೆ ಸದಸ್ಯರನ್ನಾಗಿ ಮಾಡುತ್ತಿದೆ. ಆದರೆ ‘ಭಾರತ ಮಾತೆಗೆ ಜೈ ಎನ್ನುವವರನ್ನ ಅಥವಾ ಆರ್‌ಎಸ್‌ಎಸ್ ಜಿಂದಾಬಾದ್ ಎಂದರೆ ಕ್ರಮ ಕೈಗೊಳ್ಳುತ್ತಾರೆ ಎಂದರೆ ಈ ಕಾಂಗ್ರೆಸ್‌ನ ಮನಸ್ಥಿತಿ ಏನು? ಅಧಿಕಾರಕ್ಕಾಗಿ ದೇಶದ್ರೋಹಿಗಳೊಂದಿಗೆ ರಾಜೀ ಆಗುವ, ದೇಶದ್ರೋಹಿಗಳಿಗೆ ಬೆಂಬಲ ನೀಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂಬುದು ಅಧಿಕಾರಕ್ಕೆ ಬಂದಾಗಿಂದ ಅದರ ನಡೆಗಳನ್ನ ಗಮನಿಸಬಹುದು. ಕಾಂಗ್ರೆಸ್ ಸರ್ಕಾರ ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನು ಹೊಂದಿಲ್ಲ ಎಂದು ಟೀಕಿಸಿದರು.