ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ಜಾಗ: ಡಿಸಿಎಂ ಡಿಕೆಶಿ ಹೇಳಿಕೆಗೆ JDS ಕೆಂಡ

ಬೆಂಗಳೂರು : ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ನಿವೇಶನ ನೀಡಲು ನಿರ್ಧರಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ​ನಡೆ ವಿರುದ್ಧ ಜೆಡಿಎಸ್‌ ಪಕ್ಷ ಕಿಡಿಕಾರಿದೆ. ಈ ಬಗ್ಗೆ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ JDS, ನಮ್ಮ ತೆರಿಗೆ, ನಮ್ಮ ಹಕ್ಕು ಎಂದು ಗಂಟಲು ಹರಿದುಕೊಳ್ಳುವ ಕಾಂಗ್ರೆಸ್ಸಿಗರೇ ನಿಮ್ಮ ಡೋಂಗಿತನಕ್ಕೆ ಏನೆನ್ನಬೇಕು? ಮತಕ್ಕೋಸ್ಕರ ಕನ್ನಡಿಗರ ಭೂಮಿಯನ್ನು ವಲಸಿಗರಿಗೆ ನೀಡಲು ಹೊರಟಿರುವ ನಿಮಗೆ ಧಿಕ್ಕಾರ ಎಂದು ಕಿಡಿಕಾರಿದೆ.

ಹೈಕಮಾಂಡ್‌ ಗುಲಾಮಗಿರಿಗಾಗಿ ಪರಭಾಷಿಕರ ಓಲೈಕೆ..!

ಕನ್ನಡಿಗರ ಹಿತ ಕಾಪಾಡುವ ಬದಲು ಹೈಕಮಾಂಡ್‌ ಗುಲಾಮಗಿರಿಗಾಗಿ ಪರಭಾಷಿಕರನ್ನು ಮತಕ್ಕಾಗಿ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದೀರಿ. ನಮ್ಮ ರಾಜ್ಯದ ಹೆಚ್ಚು ಪಾಲು ಬಿಹಾರಕ್ಕೆ ಹೋಗುತ್ತೆ, ಅಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ಕನ್ನಡಿಗರ ಮಕ್ಕಳ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರು ಆರೋಪಿಸಿದ್ದರು.‌ ಆದರೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲು ರಾಜ್ಯದಲ್ಲಿರುವ ಬಿಹಾರಿ ಮತದಾರರಿಗೆ ಬೆಂಗಳೂರಿನಲ್ಲಿ ನಿವೇಶನ, ಸೈಟು ಕೊಡುವುದಾಗಿ ಆಮಿಷ ಒಡ್ಡಲಾಗಿದೆ. ಇದು ಕಾಂಗ್ರೆಸ್​​ನ ಓಲೈಕೆ ರಾಜಕಾರಣ. ಕನ್ನಡಿಗರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್ಸಿನ ಜಾತ್ರೆ ನಡೆಯುತ್ತಿದ್ದು, ಯಾರದೋ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದ್ದಾರೆ ಎಂದು ಜೆಡಿಎಸ್​ ಆರೋಪಿಸಿದೆ.

ಬಿಹಾರ ಚುನಾವಣೆ (Bihar election-2025)ಹಿನ್ನಲೆ ಮತದಾನಕ್ಕೆ ರಾಜ್ಯದಿಂದ ತೆರಳಲಿರುವ ಅಲ್ಲಿನ ಮತದಾರರಿಗೆ ಮೂರು ದಿನಗಳ ಕಾಲ ರಜೆ ನೀಡುವಂತೆ ಸಂಸ್ಥೆ, ಗುತ್ತಿಗೆದಾರರು ಹಾಗೂ ಕ್ರೆಡಾಯ್​ ಸಂಸ್ಥೆಗೆ ಸೂಚಿಸುತ್ತೇನೆ. ಅಲ್ಲದೆ, ಬಿಹಾರದವರು ಇಲ್ಲದಿದ್ದರೆ ಬೆಂಗಳೂರಲ್ಲಿ ಅತ್ಯುತ್ತಮ ಕಟ್ಟಡಗಳನ್ನು ನಿರ್ಮಿಸಲು ಆಗುತ್ತಿರಲಿಲ್ಲ. ಹೀಗಾಗಿ ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ನಿವೇಶನ ಕೊಡಲಾಗುವುದು ಎಂಬ ಆಶ್ವಾಸನೆಯನ್ನ ಡಿಸಿಎಂ ಡಿ.ಕೆ. ಶಿವಕುಮಾರ್​ ನೀಡಿದ್ದರು.

Leave a Reply

Your email address will not be published. Required fields are marked *