ಬೆಂಗಳೂರು : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ, ಹಣಕಾಸು ನಿರ್ವಹಣೆ ಬಗ್ಗೆ ಸಿದ್ದರಾಮಯ್ಯನವರ ಸಲಹೆ ಪಡೆಯಿರಿ ಎಂದು ನಾನು ಹೇಳಿದ್ದೆ ಅಂದು ಅವರು ನನ್ನ ಮಾತು ಕೇಳಿದ್ದರೆ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ನಡೆದ ಗ್ಯಾರಂಟಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣಕಾಸು ನಿರ್ವಹಣೆ ಎನ್ನುವುದು ಹುಡುಗಾಟಿಕೆಯ ಮಾತಲ್ಲ. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು, ಅವರಿಗೆ ಆಡಳಿತದ ಅನುಭವ ಕಡಿಮೆ ಇತ್ತು. ಆದರೆ, ಆ ಹೊತ್ತಿಗಾಗಲೇ ಸಿದ್ದರಾಮಯ್ಯನವರು ಸುಮಾರು 10 ಬಾರಿ ಬಜೆಟ್ ಮಂಡಿಸಿ, ಆರ್ಥಿಕ ವಿಚಾರಗಳಲ್ಲಿ ಅಪಾರ ಜ್ಞಾನ ಮತ್ತು ಅನುಭವವನ್ನು ಹೊಂದಿದ್ದರು. ರಾಜ್ಯದ ಹಿತದೃಷ್ಟಿಯಿಂದ, ಪಕ್ಷ ರಾಜಕಾರಣ ಬದಿಗಿಟ್ಟು ಒಂದೆರಡು ಗಂಟೆಗಳ ಕಾಲ ಸಿದ್ದರಾಮಯ್ಯನವರ ಜೊತೆ ಕುಳಿತು ಚರ್ಚಿಸಿ, ಸಲಹೆ ಪಡೆಯಿರಿ ಎಂದು ನಾನು ವೈಯಕ್ತಿಕವಾಗಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೆ. ಆದರೆ, ಅವರು ನನ್ನ ಮಾತನ್ನು ತಿರಸ್ಕರಿಸಿದರು. ಅದರ ಪರಿಣಾಮವಾಗಿಯೇ ಅವರಿಗೆ ಸರಿಯಾಗಿ ಹಣಕಾಸು ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ ಮತ್ತು ನಂತರದ ದಿನಗಳಲ್ಲಿ ಜೈಲಿಗೆ ಹೋಗುಬೇಕಾಯಿತು ಎಂದು ಜಮೀರ್ ವಿವರಿಸಿದರು.
ಇನ್ನು ಇದೇ ಸಂದರ್ಭದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ ಜಮೀರ್, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ವಿರೋಧ ಪಕ್ಷದವರು ಬೊಕ್ಕಸ ಖಾಲಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ, ಸಿದ್ದರಾಮಯ್ಯನವರ ಆರ್ಥಿಕ ಶಿಸ್ತು ಮತ್ತು ಅನುಭವದಿಂದಾಗಿ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ. ಪ್ರತಿ ತಿಂಗಳು ಗ್ಯಾರಂಟಿ ಯೋಜನೆಗಳ ಮೂಲಕ ಒಂದು ಬಡ ಕುಟುಂಬಕ್ಕೆ ಸರಾಸರಿ ₹6,500 ರೂಪಾಯಿಗಳ ಉಳಿತಾಯವಾಗುತ್ತಿದೆ. ಇದು ಸಿದ್ದರಾಮಯ್ಯನವರ ಆರ್ಥಿಕ ಜಾದೂಗೆ ಸಾಕ್ಷಿ ಎಂದರು.
ಸದ್ಯ ಸಚಿವ ಜಮೀರ್ ಅಹ್ಮದ್ ಅವರ ಈ ಹೇಳಿಕೆಯು ಹಲವು ರಾಜಕೀಯ ಆಯಾಮಗಳನ್ನು ಹೊಂದಿದೆ. ಒಂದು ಕಡೆ, ತಮ್ಮ ನಾಯಕ ಸಿದ್ದರಾಮಯ್ಯನವರನ್ನು ಓರ್ವ ಅಪ್ರತಿಮ ಆರ್ಥಿಕ ತಜ್ಞ ಎಂದು ಬಿಂಬಿಸುವ ಪ್ರಯತ್ನವಾದರೆ, ಮತ್ತೊಂದೆಡೆ, ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪನವರ ಆಡಳಿತ ವೈಫಲ್ಯವನ್ನು ಜನರ ಮುಂದಿಡುವ ತಂತ್ರವಾಗಿದೆ. ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಬಗ್ಗೆ ಬಿಜೆಪಿ ನಿರಂತರವಾಗಿ ಟೀಕೆ ಮಾಡುತ್ತಿರುವ ಹೊತ್ತಿನಲ್ಲೇ, ನಿಮ್ಮ ನಾಯಕರಿಗೆ ಹಣಕಾಸು ನಿರ್ವಹಣೆಯೇ ತಿಳಿದಿರಲಿಲ್ಲ ಎಂದು ಪ್ರತ್ಯುತ್ತರ ನೀಡುವ ಮೂಲಕ ಜಮೀರ್ ಅವರು ವಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದಾರೆ. ಈ ಹೇಳಿಕೆಗೆ ಮುಂಬರುವ ದಿನಗಳಲ್ಲಿ ಬಿಜೆಪಿ ನಾಯಕರು ಯಾವ ರೀತಿ ತಿರುಗೇಟು ನೀಡ್ತಾರೆ ಕಾದು ನೋಡಬೇಕಿದೆ.